ಆಗ ನನಗೆ
ಏಳೋ ಎಂಟೋ ವಯಸ್ಸು. ತಮಿಳುನಾಡು-ಕರ್ನಾಟಕ
ಗಡಿಯಲ್ಲಿರುವ ಆಶ್ರಮವೊಂದಕ್ಕೆ ಅಪ್ಪ,ಅಮ್ಮ,ಅಣ್ಣನ ಜೊತೆ ಹೋಗಿದ್ದೆ. ಅಲ್ಲಿ ಊಟಕ್ಕೆ
ಕುಳಿತಾಗ ಅಲ್ಲಿದ್ದವರು ರಾಗಿ ಮುದ್ದೆ ತಿಂತೀರಾ ಎಂದು ಕೇಳಿದರು. ನನ್ನ ಅಮ್ಮ
ಇಲ್ಲ ಮಕ್ಕಳಿಗೆ ನುಂಗಲಿಕ್ಕೆ ಆಗುವುದಿಲ್ಲ ಅನ್ನವನ್ನೇ ಉಣ್ಣುತ್ತೇವೆ ಎಂದರು. ಊಟಕ್ಕೆ ಕುಳಿತಾಗ
ಎದುರಿನ ಪಂಕ್ತಿಯಲ್ಲಿ ರಾಗಿ ಮುದ್ದೆ ಬಡಿಸಿದ್ದರು. ಮುದ್ದುಮುದ್ದಾದ ಕಂದು ಬಣ್ಣದ ಕೈಮುಷ್ಠಿಯಿಂದಲೂ ದೊಡ್ಡ ಮುದ್ದೆ. ನಾನು ರಾಗಿ
ಮುದ್ದೆ ಕಂಡದ್ದೂ ಕೇಳಿದ್ದೂ ಅದೇ ಮೊದಲು. ನಾವು ಬೆಂಗಳೂರಿನಲ್ಲಿ
ನೆಲೆಸಿದ್ದರೂ ಮಂಗಳೂರಿನವರಾಗಿದ್ದರಿಂದ ಮನೆಯಲ್ಲಿ ಊಟ-ತಿಂಡಿಯೂ
ಹಾಗೇ ಇತ್ತು. ಹಾಗಾಗಿ ರಾಗಿ
ಗೊತ್ತಿದ್ದರೂ ರಾಗಿ ಮುದ್ದೆ ಗೊತ್ತಿರಲಿಲ್ಲ. ಅಮ್ಮ ನುಂಗಲಾಗುವುದಿಲ್ಲ ಎಂದಿದ್ದರಿಂದ ತಲೆಯಲ್ಲಿ ಬಂದ ಪ್ರಶ್ನೆ ಈ ದೊಡ್ಡ ಮುದ್ದೆಯನ್ನು
ಹೇಗೆ ಇಡೀಯಾಗಿ ನುಂಗುವರೆಂದು. ಬಾಯಿಯೊಳಗೆ ಪೂರ್ತಿಯಾಗಿ ಹಾಕುವುದಾದರೂ ಹೇಗೆ?
ಅವರು ದೊಡ್ಡದೊಡ್ಡ ಮುದ್ದೆಯನ್ನು ಸಣ್ಣಸಣ್ಣ ಮುದ್ದೆಯಾಗಿ ಸಾರಿನಲ್ಲಿ ಅದ್ದಿ ತಿಂದದ್ದನ್ನು ನೋಡಿದ್ದೆನೋ ಇಲ್ಲವೋ ನೆನಪಿಲ್ಲ. ಆದರೆ ತಲೆಯಲ್ಲಿ
ಬಂದ ಪ್ರಶ್ನೆ ಇನ್ನೂ ನೆನಪಿದೆ. ನೆನಪಾದಾಗ ನಗು
ಬರುತ್ತದೆ. ಅಂದ ಹಾಗೆ
ಕೆಲವು ವರುಷಗಳ ಬಳಿಕ ಅಮ್ಮ ಮನೆಯಲ್ಲಿ ಮಾಡಿದರು, ಈಗಲೂ ಒಮ್ಮೊಮ್ಮೆ
ಮಾಡುತ್ತಾರೆ. ಆದರೆ ನಾನು ಇಡೀ ಮುದ್ದೆಯನ್ನು ಹೇಗೆ ನುಂಗಲಿ ಎಂದು ಯೋಚಿಸದೇ ಸಣ್ಣಸಣ್ಣ ಮುದ್ದೆ ಮಾಡಿ ಸಾರಿನಲ್ಲಿ ಮುದ್ದೆಯನ್ನು ಅದ್ದಿ ನುಂಗುತ್ತೇನೆ.