13 November, 2019

ಚೋಟಾ ಚೋಟಾ ಚುಟುಕುಗಳು

Poems/ಚುಟುಕುಗಳು  written in Primary School

ಗುಂಡನ ಕಾರು ಓಡಿತು ಜೋರು
ಹಾಕಲು ಬ್ರೇಕು ನಿಂತಿತು ಕಾರು

ಗುಡುಗಿತು ಗುಡುಗು ಗುಡುಗುಡು ಎಂದು
ನಡುಗಿದೆ ನಾನು ಗಡಗಡ ಎಂದು
ಬಂದಿತು ಮಳೆಯು ಪಟಪಟ ಎಂದು
ಕುಣಿದಿತು ಕಿಟಕಿ ತಕತಕ ಎಂದು
ಇಲ್ಲಿಗೆ ಆಯಿತು ಈ ಪದ್ಯದ ಎಂಡು

ಅಣ್ಣ ತಮ್ಮ ಆಡಿದರು ಕ್ರಿಕೇಟು
ಸೋತನು ಅಣ್ಣ ಆಟದಲಿ
ಗೆದ್ದನು ತಮ್ಮ ಕ್ರಿಕೇಟಿನಲಿ
ನೋಡಿದೆವು ನಾವು ನಲಿದಾಡುತಲಿ

ಕಥೆ ಬರೆಯಿರಿ ಎಂದು
ಹೇಳಿದರು ಮೇಡಂ
ನಾನೇನು ಬರೆಯಲೆಂದೆ
ನಿನಗೇನು ತೋಚುವುದು
ಬರಿ ಅಂದರು ಮೇಡಂ
ಆಗ ಹೊಳೆಯಿತು
ನನಗೊಂದು ಕಥೆ
ಆದರೆ ಬರೆಯಲು ವ್ಯಥೆ

ಪುಟ್ಟಿ ಪುಟ್ಟಿ ಬಾರೆ ಪುಟ್ಟಿ
ನೀನೂ ಕಿಟ್ಟಿ ನೋಡಲು ಹಟ್ಟಿ

ಬಂದನು ಬಂದನು ಡುಮ್ಮಪ್ಪ
ನೋಡುತಲಿದ್ದನು ತಿಮ್ಮಪ್ಪ

ನನ್ನ ಹೆಸರು ಗರಗಸ
ಕೊರೆಯುವೆ ನಾನು ಸರಸರ
ಮಾಡುವೆ ಸದ್ದು ಕರಕರ
ಅಳುವ ಮರವು ಜಿರಜಿರ
ನೋಡುವ ಜನರು ನರನರ

ತೀಟೆ ಮಾಡಿದರೆ ಆಗುವುದು ನಮಗೊಂದು ಆಟ
ಆಗ ಸಿಗುವುದು ದೊಡ್ಡವರಿಂದ ಒಂದು ಕಾಟ
ಆಗ ಕಲಿಯುತ್ತೇವೆ ನಾವೊಂದು ಪಾಠ

ಅಜ್ಜ ಅಜ್ಜಿ ಬಂದರು
ಬಜ್ಜಿ ಮಾಡಿ ತಂದರು
ಗೊಜ್ಜಿ ತಿಂದು ತೇಗಿದರು

ನಮ್ಮೂರಿನ ನಾರಿ
ಆದಳು ಈಗ ಪರಾರಿ

ನಮ್ಮೂರಿನಲ್ಲಿತ್ತೊಂದು ಗದ್ದೆ
ಮಳೆ ಬಂದು ಆಯಿತು ಒದ್ದೆ
ತಿಳಿಯದೆ ಹೋಗಿ ಬಿದ್ದೆ
ಕಷ್ಟಪಟ್ಟು ಹೇಗೋ ಎದ್ದೆ
ಅಂದುಕೊಂಡೆ ನಾನು ಗೆದ್ದೆ
ಆದರೆ ಮೈ ಮಾತ್ರ ಒದ್ದೆ

ಕರಿನಾಯಿ ಕರಿನಾಯಿ ನಮ್ಮನೆಯ ನಾಯಿ ಕರಿನಾಯಿ
ಬೊಗಳುವುದು ಕರಿನಾಯಿ ನಮ್ಮನೆಯ ಕರಿನಾಯಿ

ಬಂದಿತು ತಂಪಿನ ಗಾಳಿ
ಬಂದಿತು ಧೂಳಿನ ಗಾಳಿ
ಬಂದಿತು ಚೆಂದದ ಗಾಳಿ
ನಾನು ಉಸಿರಾಡಿದ ಗಾಳಿ


ಓಡೋಡಿ ಬಂದನು ಪಾಪಚ್ಚಿ
ನೋಡಿದವನು ಗುಬ್ಬಚ್ಚಿ
ಕಾಳನು ಹಾಕಿದ ಪಾಪಚ್ಚಿ
ಹೆಕ್ಕುತ ತಿಂದಿತು ಗುಬ್ಬಚ್ಚಿ

ನನ್ನ ತಮ್ಮ ತುಂಬಾ ಡುಮ್ಮ
ಹೆದರುತ್ತಾನೆ ಕಂಡರೆ ಗುಮ್ಮ

ನಮ್ಮ ಮನೆ ಬಂದನು ನನ್ನ ತಮ್ಮ 
ಅವನು ಅಂದರೆ ಒಂದು ದೊಡ್ಡ ಡುಮ್ಮ
ನೋಡಿ ಅವನನ್ನು ನಕ್ಕಳು ನನ್ನ ಅಮ್ಮ 
ಹೆದರುತ್ತಾನೆ ಅವನು ಕಂಡರೆ ಗುಮ್ಮ

ಒಂದು ಗಂಟೆಗೆ ಊಟ ಮಾಡು
ಎರಡು ಗಂಟೆಗೆ ನಿದ್ದೆ ಮಾಡು
ಮೂರು ಗಂಟೆಗೆ ಕನಸು ಕಾಣು
ನಾಲ್ಕು ಗಂಟೆಗೆ ತಿಂಡಿ ತಿನ್ನು
ಐದು ಗಂಟೆಗೆ ಆಟ ಆಡು
ಆರು ಗಂಟೆಗೆ ಪೂಜೆ ಮಾಡು
ಏಳು ಗಂಟೆಗೆ ಟೀವಿ ನೋಡು
ಎಂಟು ಗಂಟೆಗೆ ಪಾಠ ಓದು
ಒಂಬತ್ತು ಗಂಟೆಗೆ ಊಟ ಮಾಡು
ಹತ್ತು ಗಂಟೆಗೆ ನಿದ್ದೆ ಮಾಡು
ಹನ್ನೊಂದು ಗಂಟೆಗೆ ಕನಸು ಕಾಣು
ಹನ್ನೆರಡು ಗಂಟೆಗೆ ಹೆದರಿ ಏಳು

Monday we play Football
Tuesday we play Volleyball
Wednesday we see Cricket
Thursday we see Market
Friday we do Singing
Saturday we go Jogging
Sunday will be a Holiday
And next day a Busy day

31 October, 2019

ಕನ್ನಡ ನಾಡು

ನಮ್ಮಯ ನಾಡು ಕನ್ನಡ ನಾಡು
ಕಲೆಗಳ ಬೀಡು ಈ ಕರುನಾಡು

ಹಂಪಿ ಬೇಲೂರು ಹಳೇಬೀಡು
ಶಿಲ್ಪಕಲೆ ದೇವಾಲಯಗಳ ಬೀಡು

ಕಡಲತೀರದ ಕಾರವಾರ ಮಂಗಳೂರು
ಭೂತಾರಾಧನೆ ಯಕ್ಷಗಾನಗಳ ತವರೂರು

ಭೋರ್ಗರೆಯುವ ಜೋಗ ಜಲಪಾತ
ಕೆಳಗಿದೆ ಎಂಟುನೂರಡಿಯ ಪ್ರಪಾತ

ಮಂಜು ತುಂಬಿದ ಮಡಿಕೇರಿ
ಪಕ್ಕದಲಿ ಹರಿಯುವುದು ಕಾವೇರಿ

ಕಲೆಗಳ ತವರು ಮೈಸೂರು
ಐಟಿ ನಗರಿ ಬೆಂಗಳೂರು


-Written when I was in school for Karnataka Rajyotsava.

02 May, 2019

What to put as a title when the post is so small???

Just Wondering...
When people say that they are not feeling well, what exactly does that mean?
That they are NOT FEELING WELL or they are NOT WELL?
Because sometimes you can BE WELL but NOT FEEL WELL or NOT BE WELL but FEEL WELL!!

10 January, 2019

Beekeeper's Choice


          ಒಂದಾನೊಂದು ಕಾಲದಲ್ಲಿ ಬೆಂಗಳೂರೆಂಬ ನಗರದಲ್ಲಿ ನಾನು ಐದಾರು ವರ್ಷದ ಬಾಲಕಿಯಾಗಿದ್ದೆ. ಎಲ್ಲರಂತೆ ನಾನೂ ಶಾಲೆಗೆ ಹೋಗುತ್ತಿದ್ದೆ. ಶಾಲೆಗೆ ಬರೀ ಕೈಯಲ್ಲಿ ಖಾಲಿ ಬೆನ್ನಲ್ಲಿ ಹೋಗಬಹುದೇ? ಊಹ್ಞೂಂ. ಎಲ್ಲರಂತೆ ಕೈಯಲ್ಲಿ ಬುತ್ತಿ ಚೀಲ ಬೆನ್ನಲ್ಲಿ ಪುಸ್ತಕ ಚೀಲ. ಚೀಲದೊಳಗೆ ದಿನಾ ಮೂರು ಮಂದಿ ಪ್ರಯಾಣಿಸುತ್ತಿದ್ದರು: ಬುತ್ತಿ, ಸಣ್ಣ Towel ಮತ್ತು  ಒಂದು ನೀರಿನ ಬಾಟಲಿ. ಕತೆ ನೀರಿನ ಬಾಟಲಿಯದ್ದು.

          ನೀರಿನ ಬಾಟಲಿಗೆ ಹುಟ್ಟಿದ ದಿನ, ಸಾಯುವ ದಿನ, ಹುಟ್ಟೂರು, ಮನೆತನದ ಹೆಸರು ಹೀಗೆ ವಿವಿಧ ಮಾಹಿತಿಯುಳ್ಳ T-Shirt ಇರಲಿಲ್ಲ. ಆದರೆ ಒಂದು ಬಿಳಿ ಟೊಪ್ಪಿ ಇತ್ತು. ಅದರ ಮೇಲೆ ಕೆಂಪು ಅಕ್ಷರಗಳಲ್ಲಿ Original Choice ಎಂದು ಬರೆದಿತ್ತು. Original Choice ಬಾಟಲಿಯ Origin ನನಗೆ ಗೊತ್ತಿರಲಿಲ್ಲ.

          ಒಂದು ದಿನ ಒಬ್ಬ ಹುಡುಗನು ನನ್ನ ಬಾಟಲಿ ನೋಡಿ ನಕ್ಕನು. ಅದನ್ನು ಕೈಯಲ್ಲಿ ಹಿಡಿದು ಸುರಭಿಯ Water Bottle ನೋಡಿ ಎಂದು ಟೀಚರಿಗೆ ತೋರಿಸಿದನು. ಕೆಲವು ಮಕ್ಕಳು ನಕ್ಕರು. ಟೀಚರ್ ಬಾಯಿಯ ಮೇಲೆ ಕೈಯಿಟ್ಟು ಶ್ಎಂದರು ನಗುತ್ತಾ. ನಂತರ ಮುಂದಿನ Periodನಲ್ಲಿ ಇನ್ನೊಬ್ಬರು ಬಂದು ನೀರಿನ ಬಾಟಲಿ ತೋರಿಸಲು ಹೇಳಿ, ನಾನೇನೋ ತಪ್ಪು ಮಾಡಿದ್ದೇನೆ ಎನ್ನುವಂತೆ ನೋಡುತ್ತಾ ಎಲ್ಲಿಂದ ಸಿಕ್ಕಿತು ಬಾಟಲಿ ಎಂದು ಕೇಳಿದರು. ನಾನು ಮನೆಯಲ್ಲಿ ಇತ್ತು ಎಂದಾಗ ಸುಮ್ಮನೆ ಮುಗುಳ್ನಕ್ಕರು. ನಂತರ ಇನ್ನೊಬ್ಬರೂ ನನ್ನ ಬಾಟಲಿಯನ್ನು ತೋರಿಸಲು ಹೇಳಿದರು. ಯಾಕೆ ನನ್ನ ಅಮಾಯಕ ಬಾಟಲಿ ನನ್ನ ತರಗತಿಯಲ್ಲಿ World Famous ಆಗುತ್ತಿದೆ, ಯಾಕೆ ಎಲ್ಲರೂ ನಗುತ್ತಿದ್ದಾರೆಂದು ಅರ್ಥವಾಗಲಿಲ್ಲ. ನಿಮಗೆ ಅರ್ಥವಾಯಿತೇ?

          ನನ್ನ ತರಗತಿಯಲ್ಲಿ ಮಂಗಳೂರಿನವಳೊಬ್ಬಳಿದ್ದಳು. ಅವಳು ಬೆಂಗಳೂರಿನವಳೊಬ್ಬಳಿಗೆ ಹೇಳಿದಳು ನಮ್ಮೂರಿನಲ್ಲಿ ಜೇನುತುಪ್ಪವನ್ನು ಅಂಥ ಬಾಟಲಿಯಲ್ಲಿ ಮಾರುತ್ತಾರೆ, ಬಹುಶಃ ಅಂಥದ್ದನ್ನು ಆಕೆ ತಂದಿರಬೇಕೆಂದು. ಅವಳು ನನ್ನ ಬಳಿ ಬಂದು ಕೇಳಿದಳು ನಿಮ್ಮೂರಲ್ಲಿ ಜೇನುತುಪ್ಪ ಮಾರುವ ಬಾಟಲಿಯಂತೆ ಅದು. ಇದೂ ಕೂಡಾ ಊರಿನಿಂದ ತಂದ ಜೇನುತುಪ್ಪದ ಬಾಟಲಿಯೋ ಎಂದು. ನಾನು ಹೌದೆಂದೆ. ನಾನು ಮನೆಗೆ ಹೋಗಿ ಯಾವ ಯಾವ ಮಾತುಗಳನ್ನು ಯಾರು ಯಾರಿಗೆ ಯಾವಾಗ ಹೇಳಿದರೆಂದು ಸಂದರ್ಭಸಹಿತ ಅಮ್ಮನಿಗೆ ವಿವರಿಸಿದೆನು. ಅಂದಿನಿಂದ ಬಾಟಲಿಯನ್ನು ಶಾಲೆಯಿಂದ ಬಿಡಿಸಿ ಹೊಸ ಬಾಟಲಿಯನ್ನು ಶಾಲೆಗೆ ಸೇರಿಸಲಾಯಿತು. ಇಲ್ಲಿಗೆ ಬಾಟಲಿಯ ಕತೆ ಮುಕ್ತಾಯವಾಯಿತು.

ಶುಭಂ

          ನಿಲ್ಲಿ! ಕಿಟಕಿಯನ್ನು ಮುಚ್ಚಬೇಡಿ. ನನ್ನ ನೀರಿನ ಬಾಟಲಿಯ ಕತೆ ಮುಗಿಯಿತು. ಆದರೆ ಇಂತಹದ್ದೇ ಬೇರೆ ಜೇನುತುಪ್ಪದ ಬಾಟಲಿಗಳ ಕತೆ ಬೇಡವೇ?

          ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು ಜನ ಕೃಷಿಕರು ಜೇನು ಸಾಕುತ್ತಾರೆ. ಜೇನನ್ನು ಮಾರುವಾಗ ಮದ್ಯದ ಗಾಜಿನ ಬಾಟಲಿಗಳಲ್ಲಿ ಹಾಕಿ ಮಾರುತ್ತಾರೆ. ಹೆಂಡದ ಅಂಗಡಿಗಳಿಂದ ಉಪಯೋಗಿಸಿದ ಹಳೇ ಖಾಲಿ ಬಾಟಲಿಗಳನ್ನು ಕಡಿಮೆ ದರಗಳಲ್ಲಿ ಕೊಂಡು ಅದರಲ್ಲಿ ಜೇನನ್ನು ಮಾರುತ್ತಾರೆ. ನನಗೆ ಬಾಟಲಿಗಳು ಜೇನಿನ ಬಾಟಲಿಗಳೆಂದು ತಿಳಿದಿತ್ತೇ ಹೊರತು ಮದ್ಯದ ಬಾಟಲಿಗಳೆಂದು ಆಗ ತಿಳಿದಿರಲಿಲ್ಲ.

          ಇತ್ತೀಚೆಗೆ ಊರಿಗೆ ಹೋಗಿದ್ದಾಗ ಸಂಬಂಧಿಕರ ಅಂಗಡಿಯಲ್ಲಿ ಮೂರ್ನಾಲ್ಕು ಜೇನಿನ ಬಾಟಲಿಗಳು ಮಾರಾಟಕ್ಕೆ ಇದ್ದುದ್ದನ್ನು ಕಂಡೆ. ಆಗ ನನಗೆ ಬಾಲ್ಯದ ಘಟನೆ ನೆನಪಾಗಿ ನಗು ಬಂದಿತು. ನನಗೆ ಸುಮಾರು ವರ್ಷಗಳಿಂದ ಕಾಡುತ್ತಿದ್ದ ಪ್ರಶ್ನೆಗೆ ಉತ್ತರವನ್ನು ತಿಳಿದುಕೊಂಡೆನು.

          ಕಾರಣ ಇಷ್ಟೇ. ಜೇನು Plastic ಬಾಟಲಿಯಲ್ಲಿ ಶೇಖರಿಸಿದರೆ ಅದು ಒಂದೆರಡು ವರ್ಷಗಳಲ್ಲಿ ಹಾಳಾಗುತ್ತದೆ. ಆದರೆ ಗಾಜಿನ ಬಾಟಲಿಯಲ್ಲಿ ಶೇಖರಿಸಿದರೆ ಹೆಚ್ಚು ವರ್ಷಗಳ ಕಾಲ ಬಾಳಿಕೆ ಬರುತ್ತದೆ. Plastic ಬಾಟಲಿಗಳು ಜನಸಾಮಾನ್ಯರಿಗೆ ಅಂಗಡಿಗಳಲ್ಲಿ ಲಭ್ಯ. ಆದರೆ ಗಾಜಿನ ಬಾಟಲಿಗಳು ಸಿಗುವುದಿಲ್ಲ. ನೀವು ಯಾವುದಾದರೂ ಕಾರ್ಖಾನೆಯಲ್ಲಿ ಆಹಾರ ಪದಾರ್ಥಗಳನ್ನು ತಯಾರಿಸುವವರಾದರೆ ಗಾಜಿನ ಬಾಟಲಿಗಳನ್ನು ಹೇಳಿ ಮಾಡಿಸಿ ಹೆಚ್ಚಿನ ಸಂಖ್ಯೆಯಲ್ಲಿ ಪಡೆಯಬಹುದು. ಆದರೆ ನಾಲ್ಕೈದು ಬಾಟಲಿಗಳಾಗಿ ಅಂಗಡಿಗಳಲ್ಲಿ ಕೊಂಡುಕೊಳ್ಳಲಾಗುವುದಿಲ್ಲ. ಒಂದು Plastic ಬಾಟಲಿಗೆ 20 ರೂ ಆದರೆ ಉಪಯೋಗಿಸಿದ ಗಾಜಿನ ಬಾಟಲಿಗೆ 5 ರೂ. ಇಷ್ಟು ಕಾರಣಗಳನ್ನು ನನ್ನ ಸಂಬಂಧಿಕರು ವಿವರಿಸಿದರು.

          ಇಲ್ಲಿಗೆ ಜೇನುತುಪ್ಪ (ex-ಮದ್ಯದ) ಬಾಟಲಿಗಳ ಕತೆ ಮುಗಿಯಿತು. ಆದರೆ ಶುಭಂ ಹೇಳುವ ಮುನ್ನ, ನಾಲ್ಕು ಸಾಲುಗಳನ್ನು ಸೇರಿಸುತ್ತೇನೆ.

          ನೀವು ಬಹುಶಃ ಯೊಚಿಸುತ್ತಿರಬಹುದು ಶಾಲೆಗೆ ಗಾಜಿನ ಬಾಟಲಿ ಯಾಕೆ ತೆಗೆದುಕೊಂಡು ಹೋದಳೆಂದು. ಅದು ಒಬ್ಬ ಪುಣ್ಯಾತ್ಮ Plastic ಬಾಟಲಿಯಲ್ಲಿ ಅದೂ ಮದ್ಯದ ಬಾಟಲಿಯಲ್ಲಿ ಜೇನನ್ನು ಮಾರಿದ್ದನು. ನನಗೆ Original Choice Origin ಗೊತ್ತಿಲ್ಲದ್ದ ಕಾರಣ ಮನೆಯಲ್ಲಿದ್ದ ಬಾಟಲಿಯ ಆಕಾರ ಯಾಕೋ ಇಷ್ಟವಾಗಿ ನೀರು ಕುಡಿಯಲು ಅದೇ ಬೇಕೆಂದು ಹಠ ಮಾಡಿದ್ದೆನು. ಆದರೆ ಶಾಲೆಯಲ್ಲಿ ನನ್ನ ನೀರಿನ (ex-ಜೇನುತುಪ್ಪದ ex-ಮದ್ಯದ) ಬಾಟಲಿ ಅಷ್ಟು ಪ್ರಖ್ಯಾತವಾಗುವುದೆಂದು ಎಣಿಸಿರಲಿಲ್ಲ.

ಶುಭಂ