19 May, 2009

ಕೂತರೆ ಬಿಡಲಾರದ ಕುರ್ಚಿ

     ಕುರ್ಚಿ ಎಲ್ಲರಿಗೂ ಬೇಕು. ಯಾಕೆ? ಇದೊಂದು ಪ್ರಶ್ನೆಯೇ..... ಕುರ್ಚಿ ಎಲ್ಲರಿಗೂ ಕುಳಿತುಕೊಳ್ಳಲು ಬೇಕು. ಕುರ್ಚಿ ಪ್ರತಿಯೊಬ್ಬರ ಮನೆಯಲ್ಲಿರುವ ವಸ್ತು. ಕುರ್ಚಿಗಳನ್ನು ಬೇರೆ ಬೇರೆ ರೀತಿಯ ವಸ್ತುಗಳಿಂದ ತಯಾರಿಸುತ್ತಾರೆ. ಕುರ್ಚಿಯನ್ನು ಯಾವುದೇ ವಸ್ತುವಿನಿಂದ ತಯಾರಿಸಿರಲಿ ಕುರ್ಚಿಯೆಂದೇ ಕರೆಯುತ್ತಾರೆ.

     ಕುಳಿತುಕೊಳ್ಳಲು ಬಳಸುವ ವಸ್ತುವಿಗೆ ಕುರ್ಚಿಯೆಂದೇ ಯಾಕೆ ಕರೆಯಬೇಕು??!!

     ನನ್ನ ಮನಸ್ಸಿನ ಒಳಗೆ ಕುರ್ಚಿ ಯಾಕೆ ಬಂದು ಕುಳಿತಿತೋ? ನನಗಂತೂ ಕೂತರೂ ನಿಂತರೂ ಕುರ್ಚಿ ಎದ್ದು ಹೋಗದು. ನಾನು ತಲೆ ಕೆಡಿಸಿಕೊಂಡೆ, ಕುರ್ಚಿಯನ್ನು ಮಾಡಿದ್ದು ಯಾರು? ಕುರ್ಚಿಯನ್ನು ತಯಾರಿಸಿದ ಪುಣ್ಯಾತ್ಮ, ಕುರ್ಚಿಯೆಂದೇ ಯಾಕೆ ಕರೆದ? ಇಂತಹ ಹಲವಾರು ಪ್ರಶ್ನೆಗಳು ನನ್ನ ತಲೆಯೊಳಗೆ ಕೂತ ಕುರ್ಚಿಯಲ್ಲಿ ಕೂತುಬಿಟ್ಟವೆ. ಎದ್ದೇಳಿ ಎಂದರೂ ಕೇಳುತ್ತಿಲ್ಲ.
ಯಾವುದೇ ವಿಷಯದ ಬಗ್ಗೆ ಅನುಮಾನ ಬಂದರೆ ದೊಡ್ಡವರನ್ನು ಕೇಳಿ ತಿಳಿಯಬೇಕಂತೆ. ಹಾಗೆಯೇ ಮಾಡಬೇಕೆಂದು ನಿರ್ಧರಿಸಿದೆ. ಆಗ ಪಕ್ಕದ ರೂಮಿನ ಕುರ್ಚಿಯ ಮೇಲೆ ಕುಳಿತಿದ್ದ ನನ್ನಣ್ಣನು ನನಗೆ ಕಾಣಿಸಿದನು. ತ‌ಕ್ಷಣ ಅವನ ಬಳಿ ಹೋಗಿ ಕೇಳಿದೆ, “ಈ ಕುರ್ಚಿಯನ್ನು ಕುರ್ಚಿಯೆಂದೇ ಯಾಕೆ ಕರೆಯಬೇಕು? ಕುರ್ಚಿಗೆ ಕುರ್ಚಿಯೆಂದು ಯಾರು ಹೆಸರಿಟ್ಟರು?”. “ಕುರ್ಚಿಗೆ ಕುರ್ಚಿ ಎಂದು ಕುರ್ಚಿಯ ಅಪ್ಪ ಹೆಸರಿಟ್ಟನು” ಎಂದನು. ಹಾಗಾದರೆ ಕುರ್ಚಿಯ ಅಪ್ಪ ಯಾರು?.

     ನನ್ನಣ್ಣನ ಉತ್ತರ ಸರಿ ಎನ್ನಿಸಲಿಲ್ಲವಾದ್ದರಿಂದ ನನ್ನ ತಂದೆಯವರನ್ನು ಕೇಳಿದೆ. ಆಗ ಅವರು ನನ್ನ ಹುಚ್ಚು ಪ್ರಶ್ನೆಗೆ ನಕ್ಕು “ಕೂರು + ಚಿ = ಕುರ್ಚಿ ಎಂದಾಯಿತು” ಎಂದರು. ತಮಾಷೆಯೆಂದು ನಾನು ಯಾವ ಸಂಧಿ ಎಂದು ಕೇಳಿದ್ದಕ್ಕೆ “ಅನುಕೂಲ ಸಂಧಿ” ಎಂಬ ಉತ್ತರ ಸಿಕ್ಕತು.

     ಕುರ್ಚಿಗೆ ಕುರ್ಚಿಯೆಂದು ಹೇಗೆ ಬಂತೆಂದು ಕುರ್ಚಿಯ ಮೇಲೆ ಕುಳಿತು ಯೋಚಿಸಿದಾಗಲೂ ಉತ್ತರ ಹೊಳೆಯಲಿಲ್ಲ. ಹೋಗಲಿ ಚೇರ್ ಎಂದು ಹೇಳುವುದಾದರೂ ಯಾಕೆ?

     ಯಾರಾದರು ಬಹಳ ಹೊತ್ತು ನಿಂತು ನಿಂತು ಸುಸ್ತಾಗಿದ್ದಾಗ ಏನಾಗುತ್ತದೆ? ಇನ್ನೇನು ತಾನೆ ಆಗಲು ಸಾಧ್ಯ? ಬಹಳ ಸುಸ್ತಾಗುತ್ತದೆ! ಇಂಥವರಿಗೆ ಕುಳಿತುಕೊಳ್ಳಲು ಒಂದು ಕುರ್ಚಿ ಸಿಕ್ಕಿದರೆ? ಇನ್ನೇನು ನಿಂತವರು ಕುಳಿತುಕೊಳ್ಳುತ್ತಾರೆ. ಸರಿ, ಕುಳಿತಾಗ ಅವರು ಚಿಯರ್ ಆಗುವುದಿಲ್ಲವೇ? ಆದ್ದರಿಂದ ಕುರ್ಚಿಗೆ ಚೇರ್ ಎಂಬ ಹೆಸರು ಬಂದಿತೋ ಏನೋ.
ಕುರ್ಚಿ ಬಹಳ ವರ್ಷಗಳಿಂದ ಇದೆ. ಪ್ರಸಿದ್ಧ ಉಜ್ಜಯಿನಿಯ ಪ್ರಸಿದ್ಧ ರಾಜ ವಿಕ್ರಮಾದಿತ್ಯನ ಪ್ರಸಿದ್ಧ ಕುರ್ಚಿ (ಸಿಂಹಾಸನ) ಹೇಗಿತ್ತು? ಅದನ್ನು ಹತ್ತುವ ಮುನ್ನ ಅದರಲ್ಲಿದ್ದ ಅರವತ್ತನಾಲ್ಕು ಗೊಂಬೆಗಳ ಪ್ರಶ್ನೆಗಳಿಗೆ ಉತ್ತರಿಸಬೇಕಿತ್ತಂತೆ! ಉತ್ತರಿಸಿದ ಮೇಲೆಯೇ ‘ಪಾಸ್’. ಆ ಕಾಲದಲ್ಲಿ ಅಧಿಕಾರಕ್ಕೆ ಬರಲು ಅಷ್ಟು ಬುದ್ಧಿವಂತಿಕೆ ಬೇಕಿತ್ತು.

     ಈಗೇನಾದರೂ ಇಂತಹದ್ದೇ ಕುರ್ಚಿಗಳಿದ್ದು ಗೊಂಬೆಗಳು ಪ್ರಶ್ನೆಗಳನ್ನು ಕೇಳಿದರೆ ಬಹುಶಃ ಯಾವ ರಾಜಕಾರಣಿಯೂ ಪಾಸ್ ಆಗುವುದ್ದಿಲ್ಲ. ಆದರೂ ಈಗಿನ ಕಾಲದಲ್ಲಿ ಕುರ್ಚಿಗಳಿಗೂ ರಾಜಕಾರಣಿಗಳಿಗೂ ಅತ್ಯಮೂಲ್ಯವಾದ ನಂಟು. ಕೇವಲ ಒಂದೇ ಒಂದು ಕುರ್ಚಿಗಾಗಿ ಎಷ್ಟೆಲ್ಲ ನಾಟಕ, ರಾದ್ಧಾಂತಗಳು!

     ಅಂತೂ ಇಂತೂ ನನ್ನ ತಲೆಯೊಳಗೆ ಕೂತ ಕುರ್ಚಿ ಎದ್ದು ಹೋಗಲೇ ಇಲ್ಲ. ಆಗ ನನಗೆ ಇದ್ದಕ್ಕಿದ್ದಂತೆ ಒಂದು ವಿಷಯ ನೆನಪಿಗೆ ಬಂತು. ನಾಳೆ ಶಾಲೆಯಲ್ಲಿ ಎರಡು ಕಿರುಪರೀಕ್ಷೆಗಳಿವೆ. ಓದಬೇಕಲ್ಲವೇ? ಆದ್ದರಿಂದ ಹೇಗೋ ಪ್ರಯಾಸದಿಂದ ತಲೆಯೊಳಗೆ ಕೂತ ಕುರ್ಚಿಯನ್ನು ಪಕ್ಕದ್ದಲ್ಲಿ ಕೂರಿಸಿದೆ. ನಂತರ ಅದೇ ಕುರ್ಚಿಯ ಮೇಲೆ ಕೂತು ಪರೀಕ್ಷೆಗೆ ಓದಲು ಪ್ರಾರಂಭಿಸಿದೆ.

     ಈಗ ನಿಮ್ಮ ತಲೆಯೊಳಗೆ ಕುರ್ಚಿ ಬಂದು ಕುಳಿತಿದೆಯೇ???!!!

2 comments:

  1. ಹಹ್ಹಾ! ಚೆನ್ನಾಗಿದೆ ಕುರ್ಚಿಯ ಕತೆ. ನಮ್ಮೂರಿನ ಹತ್ತಿರ (ಕೊಡಗು ಜಿಲ್ಲೆಯಲ್ಲಿ) ಕುರ್ಚಿ ಅಂತ ಒಂದು ಊರಿದೆ ಗೊತ್ತಾ? :-)

    ReplyDelete
  2. ಕುರ್ಚಿಗಾಗಿ ಪರದಾಟ ಜೀವನದುದ್ದಕ್ಕೂ ಕಾಣಿಸುತ್ತದೆ ಅಲ್ಲವೇ? ತಮಾಷೆಯಾಗಿದೆ :)

    ReplyDelete